ಸಾರಾಭಾಯಿ, ಮಲ್ಲಿಕಾ
	ಭರತನಾಟ್ಯ ಹಾಗೂ ಕೂಚುಪುಡಿ ನೃತ್ಯ ಶೈಲಿಗಳ ಪ್ರಸಿದ್ಧ ನೃತ್ಯಕಲಾವಿದೆ. ಚಿತ್ರನಿರ್ಮಾಪಕಿ, ರಂಗಸಂಯೋಜಕಿ, ಸಂಪಾದಕಿ, ಪ್ರಕಾಶಕಿ ಮತ್ತು ಪ್ರಮುಖ ಟಿ.ವಿ.ಸರಣಿಗಳ ನಿರೂಪಕಿ. ಅಪೂರ್ವ ನೃತ್ಯಕಲಾವಿದೆ ಮೃಣಾಲಿನಿ ಸಾರಾಭಾಯಿ ಇವರ ತಾಯಿ, ಪ್ರಸಿದ್ಧ ಅಣುವಿಜ್ಞಾನಿ ವಿಕ್ರಮ್ ಸಾರಾಭಾಯಿ ಇವರ ತಂದೆ. 

	ವೈವಿಧ್ಯಮಯ ಜೀವನಗತಿಗಳನ್ನು ತಮ್ಮ ತೆಕ್ಕೆಯಲ್ಲಿ ಹುದುಗಿಸಿ ಕೊಂಡು ನಡೆದರೂ ನರ್ತನ ಇವರ ಮೊದಲ ಪ್ರೀತಿ. ನೃತ್ಯಶಿಕ್ಷಣವನ್ನು ತಾಯಿಯಿಂದ ಪಡೆದರು. ಇವರ ಮೇಲೆ ದರ್ಪಣ ನೃತ್ಯಶಾಲೆ ಸಾಕಷ್ಟು ಪ್ರಭಾವ ಬೀರಿತು. ಆದರೆ ಇವರು ತಮ್ಮ ತಾಯಿಯಂತೆ ಸಂಪೂರ್ಣವಾಗಿ ನೃತ್ಯಕ್ಕೇ ತಮ್ಮನ್ನು ತೆತ್ತುಕೊಳ್ಳಲಿಲ್ಲ. ಅಹಮದಾ ಬಾದಿನ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಎಂಬ ಪ್ರತಿಷ್ಠಿತ ಸಂಸ್ಥೆಯಿಂದ ಎಂಬಿಎ ಸ್ನಾತಕೋತ್ತರ ಪದವಿಯನ್ನೂ ಸಾಂಘಿಕ ವರ್ತನೆ ಎಂಬ ವಿಚಾರವಾಗಿ ಸಂಶೋಧನೆ ಕೈಗೊಂಡು ಪಿಎಚ್.ಡಿ. ಪದವಿಯನ್ನೂ ಪಡೆದರು. 

	ಕಿಶೋರ ವಯಸ್ಸಿನಲ್ಲೇ ಹಿಂದಿ ಹಾಗೂ ಗುಜರಾತಿ ಚಿತ್ರಗಳಲ್ಲಿ ನಟಿಸಿದರು. ಮುಂದೆ ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರಾದ ಪೀಟರ್ ಬ್ರೂಕ್ ಅವರು ಇಂಗ್ಲಿಷ್ ಹಾಗೂ ಫ್ರೆಂಚ್ ಭಾಷೆಗಳಲ್ಲಿ ತಯಾರಿಸಿದ ಮಹಾಭಾರತ ನಾಟಕ ಹಾಗೂ ಚಿತ್ರದಲ್ಲಿ ದ್ರೌಪದಿಯ ಪಾತ್ರವನ್ನು ನಿರ್ವಹಿಸಿ ಪ್ರಪಂಚದ ಕಲಾಸಕ್ತರ ಮನಸೆಳೆದರು. 

	ನರ್ತಿಸುವ ಪಾದಗಳಿಂದ ಗಣೇಶ ಅಥವಾ ಮಹಿಷಾಸುರಮರ್ದಿನಿಯ ಚಿತ್ರಗಳನ್ನು ಬಿಡಿಸುವ ಅಪರೂಪ ಕಲೆಯಾದ ಚಿತ್ರನಾಟ್ಯದಲ್ಲಿ ಇವರು ಸಿದ್ಧಹಸ್ತರು. ಇವರ ಅಸಾಧಾರಣ ಪ್ರತಿಭೆಯನ್ನು ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರೂ ಮೆಚ್ಚಿಕೊಂಡಿದ್ದರು. 

	ಇವರು ಮಿಲೇಸುರ್ ಮೇರಾತುಮ್ಹಾರ ಎಂಬ ಭಾರತದ ಐಕ್ಯತೆಯ ಹಾಡಿನಿಂದಲೂ ಪ್ರಸಿದ್ಧಿ ಪಡೆದರು. ಅಂತಾರಾಷ್ಟ್ರೀಯ ಜನಪದ ನೃತ್ಯಗಳ ಸಂಸ್ಥೆ ಸಿ.ಐ.ಒ.ಎಫ್.ಎಫ್.ಗೆ ಭಾರತೀಯ ಪ್ರತಿನಿಧಿಯಾಗಿ ಇವರು ಆಯ್ಕೆಯಾಗಿದ್ದಾರೆ. ಭರತನಾಟ್ಯದ ಸಾಂಪ್ರದಾಯಿಕ ನೃತ್ಯಬಂಧಗಳು, ವೇಷಭೂಷಣ, ಸಂಗೀತ-ಇವುಗಳಲ್ಲಿನ ಏಕತಾನತೆಯನ್ನು ವಿಮುಖ ಗೊಳಿಸಿ ನವ್ಯಶೈಲಿಯ ಭರತನಾಟ್ಯವನ್ನು ಇವರು ಪ್ರದರ್ಶಿಸುತ್ತ ಬಂದಿದ್ದಾರೆ. ಇವರು ವಿನ್ಯಾಸ (ಡಿಸೈನಿಂಗ್) ಕುರಿತ ಭಾರತದ ಏಕೈಕ ಪತ್ರಿಕೆ ಇನ್‍ಸೈಡ್-ಔಟ್‍ಸೈಡ್‍ನ ಪ್ರಕಾಶಕಿಯಾಗಿದ್ದಾರೆ. 

	ಇವರ ಪ್ರತಿಭೆಗೆ ಅನೇಕ ಗೌರವ ಪ್ರಶಸ್ತಿಗಳು ದೊರೆತಿವೆ. ಫ್ರೆಂಚ್ ಸರ್ಕಾರ ಪ್ರಧಾನ ಮಾಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ಫ್ರೆಂಚ್ ಪಾಲ್ಮ್‍ದೋ ಇವರಿಗೆ ಲಭಿಸಿದೆ (1977). ಅತ್ಯುತ್ತಮ ಏಕಾಂಗಿ ನರ್ತಕಿ ಎಂಬ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಪ್ರಸ್ತುತ ದರ್ಪಣ ಪ್ರದರ್ಶಕ ಕಲೆಗಳ ಅಕಾಡೆಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.					
	(ಟಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ